ಮೂಢಾರಾಧನೆ - 
ಕೆಲವು ಭೌತವಸ್ತುಗಳು ಭೂತ ಪ್ರೇತಗಳ, ಕ್ಷುದ್ರದೇವತೆಗಳ ನೆಲೆ ಅಥವಾ ಸಂಕೇತಗಳಾಗಿವೆಯೆಂದು ನಂಬಿ ಮನುಷ್ಯ ತನ್ನ ಕಷ್ಟ ಪರಿಹಾರಕ್ಕಾಗಿ ಮತ್ತು ಇಷ್ಟಸಿದ್ಧಿಗಾಗಿ ಅವನ್ನು ಆರಾಧಿಸುವ ಕ್ರಮ (ಫೆಟಿಷಿಸಮ್). ಯಂತ್ರ ಕಟ್ಟಿಸಿಕೊಳ್ಳುವುದು, ಮಾಟ ಮಾಡಿಸುವುದು ಇತ್ಯಾದಿಗಳೆಲ್ಲವೂ ಇದರ ಅಂಗಗಳೇ ಆಗಿವೆ. ಪ್ರಾಣಿಗಳನ್ನು ಬಲಿಕೊಡುವುದು, ಮಾನವರನ್ನು ಅದರಲ್ಲೂ ಎಳೆಯ ವಯಸ್ಸಿನ ಬಾಲಕ ಬಾಲಿಕೆಯರನ್ನು ಬಲಿಕೊಡುವುದು, ಗರ್ಭಿಣಿಯರ ಬಾಣಂತಿಯರ ಹತ್ಯೆ, ನಗ್ನ ಸ್ತ್ರೀಪೂಜೆ, ನೈವೇದ್ಯಕ್ಕೆಂದು ಮದ್ಯಮಾಂಸಾದಿಗಳನ್ನು ಇಡುವುದು. ಹೆಚ್ಚಿನ ಸಿದ್ಧಿಗೆಂದು ನರಮಾಂಸ ಅಮೇಧ್ಯ ಮೂತ್ರಾದಿಗಳನ್ನು ಸೇವಿಸುವುದು ಇಂಥ ವಾಮಾಚಾರಗಳು ಈ ಬಗೆಯ ಆರಾಧನೆಗಳಲ್ಲಿ ಪ್ರಮುಖವೆನಿಸಿವೆ. ಜನರ ಮೂಢ ನಂಬಿಕೆಯಿಂದಾಗಿ, ಪ್ರಖ್ಯಾತ ದೇವರುಗಳಾದ ಬ್ರಹ್ಮವಿಷ್ಣು ಮಹೇಶ್ವರರಲ್ಲದೆ, ಮಾರಿ ಮಸಣಿ ಚಂಡಿ ಚಾಮುಂಡಿ ಮುಂತಾದ ಸಹಸ್ರಾರು ಕ್ಷುದ್ರದೇವತೆಗಳ ಸೃಷ್ಟಿಯಾಗಿದೆ. ಗಿಡ ಮರ ಕಲ್ಲುಗೋರಿ ಭೂತ ಪ್ರೇತಗಳು ಹುಟ್ಟಿಕೊಂಡಿವೆ.

	ಇಂಥ ಪೂಜಾಪದ್ಧತಿ ಭಾರತದಲ್ಲಿ ಮಾತ್ರವಲ್ಲದೆ ಆಫ್ರಿಕ ಅಮೆರಿಕ ಜಪಾನ್ ಮತ್ತು ಇನ್ನಿತರ ದೇಶಗಳಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಮತೀಯಧರ್ಮದ ಬೆಳೆವಣಿಗೆಯಲ್ಲಿ ಅಪ್ರಬುದ್ಧ ಹಂತವೆಂದು ಪರಿಗಣಿತವಾಗಿದ್ದರೂ ಇಂದಿಗೂ ಈ ಪದ್ಧತಿ ಉಳಿದುಕೊಂಡೇ ಬಂದಿರುವುದು ಆಶ್ಚರ್ಯದ ಸಂಗತಿ. ಇಂದ್ರಿಯಾತೀತವಾದ ಅತಿಮಾನುಷ ಶಕ್ತಿಯೊಂದನ್ನು ಕಲ್ಪಿಸಿಕೊಂಡು ಅದರ ವರದಹಸ್ತವನ್ನು ಸಂಪಾದಿಸುವುದೇ ಈ ಎಲ್ಲ ಪೂಜೆಗಳ ಹಿಂದಿರುವ ತತ್ತ್ವ.
(ಜಿ.ಎಸ್‍ಆರ್‍ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ